Ganapathi Stotra Sandhi From Harikathaamruthasaara In Kannada

॥ Ganapathi Stotra Sandhi from Harikathaamruthasaara Lyrics ॥

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆ
ಪರಮ ಭಗವದ್ ಭಕ್ತರಿದನಾದರದಿ ಕೇಳುವುದು ॥

ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳು
ಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ
ನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರ
ಮಹದಾಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ॥ ೧ ॥

ಏಕದಂತ ಇಭೇಂದ್ರಮುಖ ಚಾಮೀಕರಕೃತಭೂಷಣಾಂಗ
ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆನಿನಿತೆಂದು
ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ
ನೀ ಕರುಣಿಸುವುದೆಮಗೆ ಸಂತತ ಪರಮಕರುಣಾಳು ॥ ೨ ॥

ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ ಮಹದೋ ಷಘ್ನ ನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ
ಲಗ್ನವಾಗಲಿ ನಿತ್ಯಾನರಕಭಯಾಗ್ನಿಗಳಿಗಾನಂಜೆ ಗುರುವರ ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲ್ಲಿ ॥ ೩ ॥
ಧನಪ ವಿಷ್ವಕ್ಸೇನ ವೈದ್ಯಾಶ್ವಿನಿಗಳಿಗೆ ಸರಿಯೆನಿಪ ಷಣ್ಮುಖನನುಜ ಶೇಷಶತಸ್ಥದೇವೋತ್ತಮ ವಿಯದ್ಗಂಗಾ।
ವಿನುತ ವಿಶ್ವೋಪಾಸಕನೆ ಸನ್ಮನದಿ ವಿಜ್ಞಾಪಿಸುವೆ
ಲಕುಮೀವನಿತೆಯರಸನ ಭಕ್ತಿಜ್ಞಾನವ ಕೊಟ್ಟು ಸಲುಹುವುದು ॥ ೪ ॥

ಚಾರುದೇಷ್ಣಾಹ್ವಯನೆನಿಸಿ ಅವತಾರಮಾಡಿದೆ ರುಕ್ಮಿಣೀಯಲಿ
ಗೌರಿಯರಸನ ವರದಿ ಉದ್ಧಟರಾದ ರಾಕ್ಷಸರ।
ಶೌರಿಯಾಜ್ಞದಿ ಸಂಹರಿಸಿ ಭೂಭಾರವಿಳುಹಿದ ಕರುಣಿ
ತ್ವತ್ಪಾ ದಾರವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ ॥ ೫ ॥

ಶೂರ್ಪಕರ್ಣ ವಿರಾಜಿತೇಂದುವ ದರ್ಪಹರ ಉದಿತಾರ್ಕ ಸನ್ನಿಭ
ಸರ್ಪವರ ಕಟಿಸೂತ್ರ ವೈಕೃತಗಾತ್ರ ಸುಚರಿತ್ರ।
ಸ್ವರ್ಪಿತಾಂಕುಶಪಾಶಕರ ಖಳ ದರ್ಪಭಂಜನ ಕರ್ಮಸಾಕ್ಷಿಗ
ತರ್ಪಕನು ನೀನಾಗಿ ತೃಪ್ತಿಯ ಬಡಿಸು ಸಜ್ಜನರ ॥ ೬ ॥

ಖೇಶಪರಮಸುಭಕ್ತಿಪೂರ್ವಕ ವ್ಯಾಸಕೃತಗ್ರಂಥಗಳನರಿತು
ಪ್ರಯಾಸವಿಲ್ಲದೆ ಬರೆದು ವಿಸ್ತರಿಸಿದೆಯೊ ಲೋಕದೊಳು।
ಪಾಶಪಾಣಿಯೆ ಪ್ರಾರ್ಥಿಸುವೆನುಪದೇಶಿಸೆನಗದರರ್ಥಗಳ
ಕರುಣಾಸಮುದ್ರ ಕೃಪಾಕಟಾಕ್ಷದಿ ನೋಡಿ ಪ್ರತಿದಿನದಿ ॥ ೭ ॥
ಶ್ರೀಶನತಿನಿರ್ಮಲಸುನಾಭೀದೇಶವಸ್ಥಿತ ರಕ್ತಶೃಂಗಗ
ದಾಸುಶೋಭಿತಗಾತ್ರ ಲೋಕಪವಿತ್ರ ಸುರಮಿತ್ರ।
ಮೂಷಕಾಸುರ ವಾಹನ ಪ್ರಾಣಾವೇಶಯುತ ಪ್ರಖ್ಯಾತ
ಪ್ರಭು ಪೂರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿ ದಿನದಿ ॥ ೮ ॥

See Also  Narayaniyam Ekasastitamadasakam In Kannada – Narayaneyam Dasakam 61

ಶಂಕರಾತ್ಮಜ ದೈತ್ಯರಿಗತಿಭಯಂಕರಗತಿಗಳೀಯಲೋಸುಗ ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು।
ಮಂಕುಗಳ ಮೋಹಿಸುವೆ ಚಕ್ರಧರಾಂಕಿತನೆ ದಿನದಿನದಿ
ತ್ವತ್ಪದ ಪಂಕಜಗಳಿಗೆ ಎರಗಿ ಬಿನ್ನಯಿಸುವೆನು ಪಾಲಿಪುದು ॥ ೯ ॥

ಸಿದ್ಧವಿದ್ಯಾಧರಗಣಸಮಾ ರಾಧ್ಯ ಚರಣಸರೋಜ
ಸರ್ವಸುಸಿದ್ಧಿದಾಯಕ ಶೀಘ್ರದಿಂದಾಲಿಪುದು ಬಿನ್ನಪವ।
ಬುದ್ಧಿವಿದ್ಯಾಜ್ಞಾನಬಲ ಪರಿಶುದ್ಧಭಕ್ತಿವಿರಕ್ತಿನಿರುತನ
ವದ್ಯನ ಸ್ಮೃತಿಲೀಲೆಗಳ ಸುಸ್ತವನ ವದನದಲಿ ॥ ೧೦ ॥

ರಕ್ತವಾಸದ್ವಯವಿಭೂಷಣ ಉಕ್ತಿಲಾಲಿಸು ಪರಮ
ಭಗವದ್ಭಕ್ತವರ ಭವ್ಯಾತ್ಮ ಭಾಗವತಾದಿಶಾಸ್ತ್ರದಲಿ।
ಸಕ್ತವಾಗಲಿ ಮನವು ವಿಷಯ ವಿರಕ್ತಿ ಪಾಲಿಸು ವಿದ್ವದಾದ್ಯ ವಿಮುಕ್ತನೆಂದೆನಿಸೆನ್ನ ಭವಭಯದಿಂದ ಕರುಣದಲಿ ॥ ೧೧ ॥

ಶುಕ್ರಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು
ಉರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ।
ಚಕ್ರವರ್ತಿ ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ
ವಕ್ರತುಂಡನೆ ನಿನ್ನೊಳೆಂತುಂಟೋ ಈಶನನುಗ್ರಹವು ॥ ೧೨ ॥

ಕೌರವೇಂದ್ರನು ನಿನ್ನ ಭಜಿಸದ ಕಾರಣದಿ ನಿಜಕುಲಸಹಿತ
ಸಂಹಾರವೈದಿದ ಗುರುವರ ವೃಕೋದರನ ಗದೆಯಿಂದ।
ತಾರಕಾಂತಕನನುಜ ಎನ್ನ ಶರೀರದೊಳು ನೀನಿಂತು ಧರ್ಮ
ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ ॥ ೧೩ ॥

ಏಕವಿಂಶತಿ ಮೋದಕಪ್ರಿಯ ಮೂಕರನು ವಾಗ್ಮಿಗಳ ಮಾಳ್ಪ
ಕೃಪಾಕರೇಶ ಕೃತಜ್ಞ ಕಾಮದ ಕಾಯೊ ಕೈವಿಡಿದು।
ಲೇಖಕಾಗ್ರಣಿ ಮನ್ಮನದ ದುರ್ವ್ಯಾಕುಲವ ಪರಿಹರಿಸು ದಯದಿ ಪಿನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ ॥ ೧೪ ॥

ನಿತ್ಯಮಂಗಲಚರಿತ ಜಗದುತ್ಪತ್ತಿಸ್ಥಿತಿಲಯನಿಯಮನ
ಜ್ಞಾನತ್ರಯಪ್ರದ ಬಣ್ಧ್ಮೋಚಕ ಸುಮನಸಾಸುರರ ।
ಚಿತ್ತವೃತ್ತಿಗಳಂತೆ ನಡೆವ ಪ್ರಮತ್ತನಲ್ಲ ಸುಹೃಜ್ಜನಾಪ್ತನ
ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯ ಕರುಣಿಪುದು ॥ ೧೫ ॥
ಪಂಚಭೇದಜ್ಞಾನವರುಪು ವಿರಿಂಚಿಜನಕನ ತೋರು ಮನದಲಿ
ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು।
ಪಂಚವಕ್ತ್ರನ ತನಯ ಭವದೊಳು ವಂಚಿಸದೆ ಸಂತಯಿಸು ವಿಷಯದಿ ಸಂಚರಿಸಂದದಲಿ ಮಾಡು ಮನಾದಿಕರಣಗಳ ॥ ೧೬ ॥

ಏನು ಬೇಡುವುದಿಲ್ಲ ನಿನ್ನ ಕುಯೋನಿಗಳು ಬರಲಂಜೆ ಲಕ್ಷ್ಮೀ ಪ್ರಾಣಪತಿತತ್ತ್ವೇಶರಿಂದೊಡಗೂಡಿ ಗುಣಕಾರ್ಯ।
ತಾನೆ ಮಾಡುವನೆಂಬ ಈ ಸುಜ್ಞಾನವೆ ಕರುಣಿಸುವುದೆಮಗೆ
ಮಹಾನುಭಾವ ಮುಹುರ್ಮುಹು ಪ್ರಾರ್ಥಿಸುವೆನಿನಿತೆಂದು ॥ ೧೭ ॥

See Also  108 Names Sri Raghavendra Swamy In Kannada – Sri Raghavendra Stotram

ನಮೋ ನಮೋ ಗುರುವರ್ಯ ವಿಬುಧೋತ್ತಮ ವಿವರ್ಜಿತನಿದ್ರಕಲ್ಪ
ದ್ರುಮನೆನಿಪೆ ಭಜಕರಿಗೆ ಬಹುಗುಣಭರಿತ ಶುಭಚರಿತ।
ಉಮೆಯ ನಂದನ ಪರಿಹರಿಸಹಂ ಮಮತೆ ಬುದ್ಧ್ಯಾದಿಂದ್ರಿಯ
ಗಳಾ ಕ್ರಮಿಸಿ ದಣಿಸುತಲಿಹವು ಭವದೊಳಗಾವಕಾಲದಲಿ ॥ ೧೮ ॥

ಜಯಜಯತು ವಿಘ್ನೇಶ ತಾಪ ತ್ರಯವಿನಾಶನ ವಿಶ್ವಮಂಗಳ
ಜಯಜಯತು ವಿದ್ಯಾಪ್ರದಾಯಕ ವೀತಭಯಶೋಕ।
ಜಯಜಯತು ಚಾರ್ವಾಂಗ ಕರುಣಾನಯನದಿಂದಲಿ ನೋಡಿ
ಜನ್ಮಾಮಯಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ ॥ ೧೯ ॥

ಕಡುಕರುಣಿ ನೀನೆಂದರಿದು ಹೇರೊಡಲ ನಮಿಸುವೆ ನಿನ್ನಡಿಗೆ
ಬೆಂಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದು।
ನಡುನಡುವೆ ಬರುತಿಪ್ಪ ವಿಘ್ನವ ತಡೆದು ಭಗವನ್ನಾಮಕೀರ್ತನೆ
ನುಡಿನುಡಿಗೆ ಎನ್ನಿಂದ ಪ್ರತಿದಿವಸದಲಿ ಮರೆಯದಲೆ ॥ ೨೦ ॥

ಏಕವಿಂಶತಿ ಪದಗಳೆನಿಸುವ ಕೋಕನದ ನವಮಾಲಿಕೆಯ
ಮೈನಾಕಿತನಯಾಂತರ್ಗತ ಶ್ರೀಪ್ರಾಣಪತಿಯೆನಿಪ।
ಶ್ರೀಕರಜಗನ್ನಾಥವಿಠ್ಠಲ ಸ್ವೀಕರಿಸಿ ಸ್ವರ್ಗಾಪವರ್ಗದಿ
ತಾ ಕೊಡುವ ಸೌಖ್ಯಗಳ ಭಕುತರಿಗಾವ ಕಾಲದಲಿ ॥ ೨೧ ॥

*****
ಶ್ರೀ ಜಗನ್ನಾಥದಾಸರು

Ganapathi Stotra Sandhi from Harikathaamruthasaara in English: